ಬಸವನಹುಳು
	ಪ್ರಾಣಿ ರಾಜ್ಯದ ಮಾಲಸ್ಕ (ಮೃದ್ವಂಗಿ) ವಂಶದ, ಉದರಪದಿವರ್ಗದ, ಪಲ್ಮೊನೇಟ ಗಣದ ಹೆಲಿಪೀಡಿ ಕುಟುಂಬದ ಸದಸ್ಯ ಪ್ರಾಣಿ. (ಸ್ನೇಲ್), ಭುಚರವಾಸಿ ಅಕಶೇರುಕ. ಸಾಮಾನ್ಯವಾಗಿ ಹುಲ್ಲುಗಾವಲು, ತೋಟ ಅಧಿಕ ತೇವಾಂಶವಿರುವ ಸ್ಥಳಗಳಲ್ಲಿ ವಾಸ. ಬಸವನಹುಳುವಿನಲ್ಲಿ ಸುಮಾರು 40,000 ಜೀವಂತ ಪ್ರಭೇದಗಳಿವೆ. ಹಗಲಿನಲ್ಲಿ ಎಲೆಗಳ ಕೆಳಭಾಗದಲ್ಲಿ ಕಲ್ಲುಗಳ ಕೆಳಗೆ, ಮರದ ದಿಮ್ಮಿಗಳ ಕೆಳಗೆ ಮತ್ತು ಗಿಡಗಳ ಕೆಳಭಾಗದಲ್ಲಿ, ವಿಶ್ರಮಿಸುತ್ತಿರುತ್ತದೆ. ಸಂಜೆ, ಇರುಳು ಮತ್ತು ಮುಂಜಾನೆ ವೇಳೆಗಳಲ್ಲಿ ಹೊರಬಂದು ಹರಿಯುತ್ತಿರುತ್ತದೆ. ಪಾದದ ಮೇಲೆ ನಿಧಾನವಾಗಿ ತೆವಳುತ್ತಿರುವಾಗ ತಲೆ ಹಾಗೂ ಶರೀರ ಚಿಪ್ಪಿನಿಂದ ಹೊರಕ್ಕೆ ಬರುತ್ತದೆ. ಚಿಪ್ಪನ್ನು ಬೆನ್ನಿನ ಮೇಲೆ ಹೊತ್ತು ನಡೆಯುತ್ತದೆ. ಇದರ ಒಳಭಾಗದಲ್ಲಿ ತಿರುಪುಕೋಣೆ ಉಂಟು. ಚಿಪ್ಪಿನ ಬಾಯಿಯನ್ನು ಮುಚ್ಚಲು ಮುಚ್ಚಳ ಇಲ್ಲ. ಪ್ರಾಣಿ ಚಲಿಸುತ್ತಿರುವಾಗ ಶರೀರ ಚಿಪ್ಪಿನಿಂದ ಹೊರಕ್ಕೆ ಪೂರ್ಣವಾಗಿ ಚಾಚಿಕೊಂಡಿರುತ್ತದೆ. ಯಾರಾದರೂ ಇದನ್ನು ಮುಟ್ಟಿದ ಕೂಡಲೇ ಇದು ತನ್ನ ಪೂರ್ಣ ದೇಹವನ್ನು ಚಿಪ್ಪಿನೊಳಕ್ಕೆ ಎಳೆದುಕೋಳ್ಳುತ್ತದೆ. ಹೀಗೆ ಚಿಪ್ಪು ಬಸವನಹುಳುವಿಗೆ ರಕ್ಷಣೆ ನೀಡುತ್ತದೆ. ಅದೂ ಅಲ್ಲದೇ ಚಿಪ್ಪು ಈ ಪ್ರಾಣಿಯ ಒಂದು ಮುಖ್ಯ ಲಕ್ಷಣ ಕೂಡ. ಸುರುಳಿಯಂತೆ ಇದರ ಆಕಾರ. ಸುರುಳಿಗಳು ಬಲಗಡೆಗೆ ತಿರುಗಿರುತ್ತವೆ. ಆದ್ದರಿಂದ ಇದನ್ನು ಬಲಮುರಿ ಶಂಖ ಎನ್ನುವುದುಂಟು. ಅಪರೂಪವಾಗಿ ಸುರುಳಿಗಳು ಎಡಗಡೆಗೆ ತಿರುಗಿರುತ್ತವೆ. ಇದು ಎಡಮುರಿ ಶಂಖ. ಶಂಖದಲ್ಲಿ ಹೆಚ್ಚು ಸುಣ್ಣದ ಅಂಶವಿರುತ್ತದೆ. ಕೆಲವು ಬಸವನಹುಳುಗಳಿಗೆ ಹೊರಚಿಪ್ಪು ಇರುವುದಿಲ್ಲ. ಇಂಥವುಗಳಿಗೆ ಸುಂಬಳದ ಹುಳು (ಸ್ಲಗ್) ಎಂದು ಹೆಸರು ಭೂವಾಸಿ ಬಸವನಹುಳುವನ್ನು ಶಂಬೂಕವೆಂದೂ ಕೆಲವು ಜಲವಾಸಿ ಶಂಖದ ಪ್ರಾಣಿಗಳನ್ನು ಬಸವನಹುಳುಗಳೆಂದೂ ಕರೆಯುವುದುಂಟು. ಸಮುದ್ರದ ಬಸವನಹುಳು, ಕೊಳದ ಬಸವನ ಹುಳು, ನದಿಯ ಬಸವನ ಹುಳು. ಹೀಗೆ ಅನೇಕ ರೀತಿಯ ಬಸವನಹುಳುಗಳಿವೆ.

	ಇತರ ಮೃದ್ವಂಗಿಗಳಂತೆ ಇವುಗಳ ಚರ್ಮ ಕೂಡ ಮೃದು. ಹೊರಭಾಗದಲ್ಲಿ ಲೋಳೆ ದ್ರವ ಸ್ರವಿಸುತ್ತಿರುವುದು. ಹೀಗಾಗಿ ಇವು ವೈರಿಗಳ ಹಿಡಿತದಿಂದ ಸುಲಭವಾಗಿ ನುಣಿಚಿಕೊಳ್ಳಬಲ್ಲವು. ಚರ್ಮದ ಹೊರ ಮಡಿಕೆಯ ಒಳಭಾಗ ಪೊಳ್ಳು. ಇದಕ್ಕೆ ಮ್ಯಾಂಟಲ್ ಅವಕಾಶ ಎಂದು ಹೆಸರು. ಇದರ ಛಾವಣಿಗೆ ಹೊದಿಸಿರುವ ಚರ್ಮದ ಭಾಗ ಉಸಿರಾಟಕ್ಕೆ ನೆರವಾಗುತ್ತದೆ. ಉಸಿರಟದ ಅಂಗವಾದ ಟಿನಿಡಿಯಮ್ ಬಸವನಹುಳುವಿಗಿರುವುದಿಲ್ಲ. (ಉಳಿದ ಮೃದ್ವಂಗಿಗಳಿಗಿದೆ.) ಹೆಚ್ಚಿನ ಬಸವನಹುಳು ಪ್ರಭೇದಗಳಲ್ಲಿ ವಿಸರ್ಜನ ಮತ್ತು ಶ್ವಾಸನಾಳಗಳು ಕೂಡಿಕೊಂಡೇ ಇರುತ್ತವೆ. ಶರೀರದ ಮುಂಭಾಗದಲ್ಲಿ ಎರಡು ಜೊತೆ ಸ್ಪರ್ಶಾಂಗಗಳಿವೆ. (ಟೆಂಟಕಲ್ಸ್). ಕಣ್ಣುಗಳು ದೊಡ್ಡ ಸ್ಪರ್ಶಾಂಗದ ತುದಿಯಲ್ಲಿವೆ. ಉಳಿದ ಮೃದ್ವಂಗಿ ಮತ್ತು ಉದರಪಾದಿಗಳಲ್ಲಿ ಶಾರೀರಿಕ ಅಸಮತೆ ಇರುವುದಾದರೂ ಬಸವನ ಹುಳುಗಳಲ್ಲಿ ಮಾತ್ರ ಶಾರೀರಿಕ ಸಮತೆ ಕಂಡುಬರುತ್ತದೆ. ನರಗಳು ಅನ್ನನಾಳದ ಸುತ್ತ ಗುಂಪುಗೂಡಿಕೊಂಡು ಮಿದುಳು ಎನ್ನಿಸಿಕೊಳ್ಳುತ್ತವೆ.

	ಬಸವನಹುಳು ದ್ವಿಲಿಂಗ ಪ್ರಾಣಿ. ವಿಸರಲ್ ಸುರುಳಿಯಲ್ಲಿ ಒಂದೇ ಒಂದು ಜನನ ಗ್ರಂಥಿ ಉಂಟು. ಇದು ರೇತಸ್ಸು ಮತ್ತು ಅಂಡ ಎರಡನ್ನೂ ಬೇರೆ ಬೇರೆಯಾಗಿ ಉತ್ಪತ್ತಿಮಾಡುತ್ತದೆ. ಸಂಭೋಗ ಕಾಲದಲ್ಲಿ ಎರಡು ಬಸವನಹುಳುಗಳು ಒಂದಾಗುತ್ತವೆ. ಅವುಗಳ ಜನನೇಂದ್ರಿಯ ದ್ವಾರಗಳು ಹಿಗ್ಗುತ್ತವೆ. ಹೊರಕ್ಕೆ ಚಾಚಲ್ಪಟ್ಟ ಒಂದರ ಶಿಶ್ನ ಇನ್ನೊಂದರ ಜನನೇಂದ್ರಿಯ ರಂಧ್ರದೊಳಕ್ಕೆ ತೂರಿಸಲ್ಪಡುತ್ತದೆ. ಈ ರೀತಿ ಸಂಭೋಗವಾಗುವಾಗ ವಿಸರ್ಜಿಸಲ್ಪಟ್ಟ ರೇತಸ್ಸು ಆಯಾ ಬಸವನಹುಳುಗಳ ಸ್ಪರ್ಮತೀಕಗಳಲ್ಲಿ ಶೇಖರಿಸಲ್ಪಡುತ್ತದೆ. ಈ ರೀತಿಯಾಗಿ ರೇತಸ್ಸಿನ ವಿನಿಮಯಾನಂತರ ಅವು ಸಂಭೋಗದಿಂದ ಬೇರ್ಪಡುತ್ತವೆ. ಗರ್ಭ ಕಟ್ಟಿದನಂತರ ಅಂಡಗಳನ್ನು ತೇವವಾದ ಮಣ್ಣಿನಲ್ಲಿ ಇಡುತ್ತವೆ. ಇವು ಬೆಳೆದು ಮೂರು ವಾರಗಳಲ್ಲಿ ಸಣ್ಣ ಬಸವನಹುಳುಗಳು ಮೊಟ್ಟೆಗಳಿಂದ ಹೊರಬರುತ್ತವೆ. ಬಸವನ ಹುಳುವಿನ ಆಯುಷ್ಯ ಸುಮಾರು ಒಂದರಿಂದ ನಾಲ್ಕು ವರ್ಷಗಳು.
(ಕೆ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ